ಟ್ರ್ಯಾಡೆಸ್‍ಕ್ಯಾಂಷಿಯ
	ಕಮೆಲೈನೇಸೀ ಕುಟುಂಬಕ್ಕೆ ಅಮೆರಿಕ. ಇದರಲ್ಲಿ ಸುಮಾರು 90 ಪ್ರಭೇದಗಳು ಉಂಟು. ಇವುಗಳಲ್ಲಿ ಹೆಚ್ಚಿನವನ್ನು ಅಲಂಕಾರಸಸ್ಯಗಳಾಗಿ ತೋಟ, ಮನೆಯ ಅಂಗಳ, ಕಿಟಕಿ, ತೂಗು ಬುಟ್ಟಿ, ಕುಂಡ ಮುಂತಾದವುಗಳಲ್ಲಿ ಬೆಳೆಸುವರು. ಪ್ರಭೇದಗಳಲ್ಲಿ ನೆಟ್ಟಗೆ ಬೆಳೆಯುವ ಬಗೆಗಳೂ ಉಂಟು. ಗೆಣ್ಣುಗಳ ಬಳಿ ಬೇರೊಡೆಯುತ್ತ ನೆಲದ ಮೇಲೆ ಹರಡಿಕೊಂಡು ಬೆಳೆಯುವ ಬಗೆಗಳೂ ಉಂಟು. ಇಂಥ ಪ್ರಭೇದಗಳಿಗೆ ಕೋಳಿಕಾಲು ಬಳ್ಳಿ ಎಂಬ ಹೆಸರಿದೆ. ಎಲೆಗಳು ಸರಳ, ಆಕಾರದಲ್ಲಿ ಅಂಡದಂತೆ ಇಲ್ಲವೆ ಭರ್ಜಿಯಂತೆ. ಬಣ್ಣ ಪಾಟಿಲ. ಕೆಲವು ಬಗೆಗಳ ಎಲೆಗಳ ಮೇಲೆ ಬಣ್ಣ ಬಣ್ಣದ ಪಟ್ಟೆಗಳಿರುವುದುಂಟು. ತೊಟ್ಟು ಸಾಧಾರಣವಾಗಿ ಇಲ್ಲ. ಎಲೆಯ ಬುಡ ಕಾಂಡವನ್ನು ಸುತ್ತಿಕೊಂಡಂತಿದೆ. ಹೂಗಳು ಸೈಮೋಸ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೊಂದು ಹೂವಿನಲ್ಲೂ 3 ಪುಷ್ಪಪತ್ರಗಳು, 3 ದಳಗಳು, 6 ಕೇಸರಗಳು ಹಾಗೂ 3 ಕಾರ್ಪೇಲುಗಳಿಂದ ರಚಿತವಾಗಿರುವ ಅಂಡಾಶಯ ಇದೆ. ಫಲ ಸಂಪುಟ ಮಾದರಿಯದು. ಹೂಗಳ ಬಣ್ಣ ಬಿಳಿ, ನೀಲಿ, ಕೆಂಪು ಇತ್ಯಾದಿ. ದಳಗಳು ಬಿಡಿ ಬಿಡಿಯಾಗಿವೆ. ಟ್ರ್ಯಾಡೆಸ್ ಕ್ಯಾಂಷಿಯದಲ್ಲಿ ಫ್ಲೂಮಿನೆನ್ಸಿಸ್, ಫಸ್ಕೇಟ, ರೆಜೀನೀ, ಬ್ರೆವಿಕಾಲಿಸ್, ನ್ಯಾವಿಕ್ಯುಲೇರಿಸ್, ರಿಫ್ಲೆಕ್ಸ, ವರ್ಜಿನಿಯಾನ, ಆಕ್ಸಿಡೆಂಟ್ಯಾಲಿಸ್, ಜೆನಿಕ್ಯುಲೇಟ, ಈಲಾಂಗೇಟ ಮುಂತಾದ ಪ್ರಮುಖ ಬಗೆಗಳುಂಟು, ಇವನ್ನು ಕಾಂಡತುಂಡುಗಳಿಂದ ಬೆಳೆಸಲಾಗುತ್ತದೆ. ಬಿಸಿಲು ಚೆನ್ನಾಗಿ ಬೀಳುವಂಥ ಮತ್ತು ನೀರು ಯಥೇಚ್ಛವಾಗಿ ಒದಗುವಂಥ ಸ್ಥಳಗಳಲ್ಲಿ ಇವು ಚೆನ್ನಾಗಿ ಬೆಳೆಯುವುವು. 
(ಡಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ